ಆದಿಕಾಂಡ
ಬೈಬಲಿನ ಮೊದಲನೆಯ ಪುಸ್ತಕ (ಜೆನೆಸಿಸ್). ಮೂಲ ಗ್ರೀಕ್ ಹಸ್ತಪ್ರತಿಗಳಲ್ಲಿ ಇದನ್ನು ಆದಿ ಸಂಗತಿಗಳ ಗ್ರಂಥ (ಬುಕ್ ಆಫ್ ಆರಿಜಿನ್ಸ್) ಎಂಬುದಾಗಿ ಕರೆದಿದ್ದಾರೆ. ಎರಡು ಮುಖ್ಯ ಭಾಗಗಳಿವೆ. 1. ಅನಾದಿಯ ವಿಚಾರಗಳು : ಸೃಷ್ಟಿಯ ಕಥೆ, ಪಾಪದ ಮೂಲ, ನಾಗರಿಕತೆಯ ಆರಂಭ, ಜಲಪ್ರಳಯ, ಜನರು ಲೋಕದಲ್ಲಿ ಚದರಿ ಹೋದದ್ದು - ಈ ವಿಷಯಗಳು ಆರಂಭದ ಹನ್ನೊಂದು ಅಧ್ಯಾಯಗಳಲ್ಲಿವೆ. 2. ಮೂಲ ಪಿತೃಗಳ ಚರಿತ್ರೆ : ಇದರಲ್ಲಿ ಏಬ್ರಾಹಾಮ್, ಐಜಾóಕ್ ಮತ್ತು ಯಾಕೋಬ್ ಎಂಬ ಮೂವರು ಮೂಲ ಪಿತೃಗಳ ಸಂಗತಿಗಳು ವಿವರಿಸಲ್ಪಟ್ಟಿವೆ. ಪುಸ್ತಕದ ಅಂತ್ಯಭಾಗದಲ್ಲಿ ಯೋಸೇಫನೆಂಬ ಮೂಲ ಪಿತೃವಿನ ಸಂಗತಿ ಇದೆ. ಮಧ್ಯದಲ್ಲಿ ಅನೇಕ ವಂಶಾವಳಿಗಳು ಬರುತ್ತವೆ. ಕೊನೆಗೆ ದೇವರಿಂದ ಆರಿಸಲ್ಪಟ್ಟ ಇಸ್ರೇಲ್ ಜನಾಂಗಕ್ಕೆ ವಿಶೇಷ ಪ್ರಾಧಾನ್ಯವಿದೆ.

ಆದಿಕಾಂಡವನ್ನು ಕೂಲಂಕುಷವಾಗಿ ಅಭ್ಯಾಸ ಮಾಡಿದ ಪಂಡಿತರು ಇದರಲ್ಲಿ ಮುಖ್ಯವಾಗಿ ಎರಡು ಸಂಪ್ರದಾಯಗಳು ಇವೆ ಎಂದು ಹೇಳುತ್ತಾರೆ. ಒಂದರಲ್ಲಿ ದೇವರನ್ನು ಯಾಹು ಎಂದೂ, ಇನ್ನೊಂದರಲ್ಲಿ ಎಲೋಹಿಮ್ ಎಂದೂ ಕರೆದಿದ್ದಾರೆ. ಈ ಎರಡು ಸಂಪ್ರದಾಯಗಳೂ ಒಟ್ಟಾಗಿ ಸಂಪಾದಿತವಾಗಿ ಆದಿಕಾಂಡ ಪುಸ್ತಕವಾಗಿದೆ ಎನ್ನುತ್ತಾರೆ. ಕೆಲವರು ಈ ವಾದವನ್ನು ತಿರಸ್ಕರಿಸಿ ಸಂಪ್ರದಾಯ ಬಾಯಿಂದ ಬಾಯಿಗೆ ಬದಲಾಗುವ ರೀತಿಗೆ ವಿಶೇಷ ಪ್ರಾಧಾನ್ಯ ಕೊಟ್ಟುದರಿಂದ ಈಗಿನ ಸ್ವರೂಪ ಬಂತು ಎಂದು ಹೇಳುತ್ತಾರೆ. 										
(ಎಂ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ